27.11.06

ದೂರಾಗುವೇಕೆ?

ದೂರ ಹೋಗದಿರು ಬಲು ದೂರ ಹೋಗದಿರು
ನಿನಗೂ ತಿಳಿವಿದೆ ನನಗೂ ಅರಿವಿದೆ
ನಾವಿಬ್ಬರೂ ಸವೆಸುವ ಹಾದಿ
ಎಂದಿಗೂ ಒಂದಾಗದೆಂದು
ದೂರ ಹೋದರೂ ನನ್ನ ನೆನಪಿನಂಗಳದಲ್ಲಿ ನಲಿದಾಡುತಿರು
ಅಗಲದಿರು ಅಗಲದಿರು
ನೀನೆಂದೂ ಅಗಲದಿರು

ಎಷ್ಟೊಂದು ಸುಖದ ಕ್ಷಣಗಳಿದ್ದವು
ಎಲ್ಲವನ್ನೂ ತೊರೆದುಬಿಟ್ಟಿಯಲ್ಲಾ
ಒಂದೇ ಒಂದು ಬಿಗುಮಾನದ ಆ ಕ್ಷಣ
ಮನವೊಲಿಸಿದರೂ ಸಡಿಲವಾಗದ ಬಿಗುಮಾನ
ಆದರೂ ಹೃದಯ ಕೇಳಲೊಲ್ಲದು
ಕಣ್ಣಿನಿಂದ ಹೃದಯದ ಬೆಂಕಿಯೇ ನೀರಾಗಿ ಹನಿಯುತಿದೆ
ಅಗಲದಿರು ಅಗಲದಿರು
ನೀನೆಂದೂ ಅಗಲದಿರು

ಸಂವತ್ಸರ ಕಳೆಯುತಿದೆ
ಸಂವತ್ಸರ ಮರಳುತಿದೆ
ಆದರೂ ನೋವಿನ ಕಾಲ ಬದಲಾಗಲಿಲ್ಲವಲ್ಲಾ
ನಿನ್ನ ನೆನಪು ಇರುವಷ್ಟು ಆಳ
ಸಮುದ್ರದಲ್ಲಿರುವುದು ಸಾಧ್ಯವೇ
ಯಾರು ತಿಳಿದಿಹರು ಮುಂದೇನಾಗುವುದೆಂದು

ಇನ್ನೂ ಏನೇನೋ ಅನುಭವಿಸಬೇಕಿದೆಯೋ
ಯಾರು ಬಲ್ಲರು ಯಾರು ಬಲ್ಲರು
ಅಗಲದಿರು ಅಗಲದಿರು
ನೀನೆಂದೂ ಅಗಲದಿರು
ಅಗಲಿದರೂ ನೀನು

25.11.06

ಯಾವ ಮೋಹನ ಮುರಳಿ ಕರೆಯಿತು

ನನ್ನ ಮನಸ್ಸನ್ನು ಯಾವತ್ತೂ ಕಾಡುವ ಹಾಡಿದು.

ಸಂಗೀತ : ಮೈಸೂರು ಅನಂತಸ್ವಾಮಿ
ಸಾಹಿತ್ಯ : ಗೋಪಾಲ ಕೃಷ್ಣ ಅಡಿಗ
ಹಾಡುಗಾರರು: ರತ್ನಮಾಲಾ ಪ್ರಕಾಶ್

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ತರಣಗಣ ಧೀರಿಂಗಣ!

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊರೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ?

ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ!