2.12.06

ನೀನೇಕೆ ಇಷ್ಟವಾದೆ?

ನಿನ್ನನ್ನು ಮನದಿಂದ ದೂರ ಮಾಡಿದಷ್ಟೂ ನೀನೇಕೆ ಮತ್ತಷ್ಟು ಇಷ್ಟವಾಗುವೆ?

ನನ್ನ ಹಲವು ರಾತ್ರಿಗಳನ್ನು ಕನಸಿನಿಂದ ಸಿಂಗರಿಸಿ ಬೆಳಗಿನಂತಾಗಿಸಿದ ನೀನು
ರಾತ್ರಿಯಿಡೀ ನಿನ್ನ ಸವಿನೆನಪುಗಳಲ್ಲಿ ಮಗ್ಗುಲು ಬದಲಿಸುತ್ತಲೇ ಇರುವಂತೆ ಮಾಡಿದ ನೀನು

ಬೆಳಗಿನ ಸವಿ ನಿದ್ದೆಯನ್ನೂ ಮೀರಿ ನೆನಪುಗಳ ಮೃದುಮಧುರ ಕೈಬಡಿತದಿಂದ ಎಚ್ಚರಿಸಿ
ಇಷ್ಟು ಬೇಗ ಯಾಕೆ ಎದ್ದೆ ಮಗಾ ಎಂದು ಅಮ್ಮ ಪ್ರೀತಿಯಿಂದಲೇ ಕೇಳುವಂತೆ ಮಾಡಿದ ನೀನು

ಸದಾ ಅಂತರ್ಮುಖಿಯಾಗಿಯೇ ಇದ್ದ ನನ್ನಲ್ಲಿ ಸತ್ತು ಹೋಗಿದ್ದ ಒಲವಿನ ಭಾವನೆಗೆ ನೀರೆರೆದು ಚಿಗುರಿಸಿದ ನೀನು
ಸವಿಯೊಲವು, ಅಕ್ಕರೆಯ ಸ್ನೇಹ, ಅನುಪಮ ಕಾಳಜಿಯ ಸಾಗರವೇ ಆಗಿ
ಸ್ನೇಹದ ಸಾಕಾರಮೂರ್ತಿಯಾಗಿಬಿಟ್ಟೆಯಲ್ಲಾ ಎಂದು ಅಂದುಕೊಳ್ಳುವಷ್ಟರಲ್ಲೇ....

ಕಾರಣವಿಲ್ಲದೆ ದೂರವಾಗಿದ್ದೇಕೆ ಓ ನನ್ನ ಒಲವೇ?
ಅಥವಾ ಕಾರಣ ಇದ್ದರೂ ಅದನ್ನು ಹೇಳಲಾಗದೆ ಹೋದೆಯಾ?
ಬಹುಶಃ ಈ ನಿನ್ನ ಪ್ರೀತಿಯ ಗೆಳೆಯನ ಮನ ನೋಯಿಸಬಾರದು ಎಂಬ ತುಡಿತ
ಅಂತ ಈ ನನ್ನ ಮನಸ್ಸು ಸಾರಿ ಸಾರಿ ಹೇಳುತಿದೆ.

ನಾನು ನಿನ್ನಿಂದ ಕೇಳಿದ್ದು ಕಡಿಮೆ, ಪಡೆದದ್ದು ಹೆಚ್ಚು. ಯಾಕೆ ಅಂತ ಕೇಳ್ತೀಯಾ?
ಹೌದು ಮನದೊಳಗಿನ ನೋವುಗಳನ್ನೆಲ್ಲಾ ಹಂಚಿಕೊಂಡೆನಲ್ಲಾ...
ಅಂದು ನೀನು ಆಡಿದ ಸಮಾಧಾನದ ನುಡಿಗಳಿನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿವೆ.

ನನ್ನ ಜೀವನ ಆವರಿಸಿಕೊಂಡ ಚಳಿಯನ್ನು ಬೆಚ್ಚಗಿಡೋ ಈ ನೆನಪುಗಳೇ ಸಾಕು.
ಸ್ನೇಹಕ್ಕೊಂದು ಹೊಸ ಅರ್ಥ ಕಲ್ಪಿಸಿಕೊಟ್ಟದ್ದು ನೀನೇ ಅಲ್ಲವೇ?
ದುಃಖ ಹಂಚಿಕೊಳ್ಳಲು ಒಂದು ನೆಪವಷ್ಟೇ.

ಆದರೆ ಮನದ ಮಿಡಿತಗಳು, ತುಡಿತಗಳು ನಮ್ಮನ್ನು
ದೂರದೂರವೇ ಇದ್ದರೂ ಹತ್ತಿರ ಮಾಡಿದ್ದು ಎಷ್ಟು ನಿಜ!

ನಿನ್ನ ಜೀವನದಲ್ಲೂ ನನಗಿಂತ ಹೆಚ್ಚು ತೀವ್ರವಾದ ನೋವಿನ ಅಲೆಯಿದೆ
ಅದನ್ನು ಬಚ್ಚಿಟ್ಟುಕೊಂಡು ಈ ಗೆಳೆಯನನ್ನು ನೀನು ಸಮಾಧಾನಿಸುತ್ತಿದ್ದ ಬಗೆ
ಒಮ್ಮೊಮ್ಮೆ ಭಾವ ಪರವಶವಾಗುತ್ತಿದ್ದೆ. ಮಗದೊಮ್ಮೆ
ಮಗುವನ್ನು ಸಂತೈಸುವ ತಾಯಿಯಾಗಿ ಅಲ್ಲಿಂದಲೇ ಕಾಣದ ಕೈಗಳಿಂದ ತಲೆ ನೇವರಿಸುತ್ತಿದ್ದೆ.

ಓಹ್... ನಿನ್ನೊಂದಿಗೆ ಮಾತನಾಡುತ್ತಿದ್ದ ಆ ಸುಂದರ ಕ್ಷಣಗಳು
ಬಹುಶಃ ಇದುವರೆಗಿನ ನನ್ನ ಜೀವನದ ರಸ ನಿಮಿಷಗಳು

ನೀನು ದೂರವಾಗಿದ್ದು ನನ್ನ ಜೀವನದ ಅತ್ಯಂತ ವೇದನೆಯ ವಿಷಯವೂ
ಆಯಿತು. ಅತ್ಯಂತ ಸಂತೋಷಕ್ಕೂ ಅತ್ಯಂತ ದುಃಖಕ್ಕೂ ನೀನೇ ಕಾರಣವಾಗಿ
ಸುಖೇ ದುಃಖೇ ಸಮೇ ಕೃತ್ವಾ ಅನ್ನೋ ಭಗವದ್ಗೀತೆಯ ನುಡಿಯನ್ನು ನೆನಪಿಸಿದೆ.

ನೀನು ದೂರವಾಗಿರುವುದೂ ಒಂದು ಪಾಠವೇ. ದುಃಖ ಸಹಿಸುವುದನ್ನು
ಅರಿತುಕೊಳ್ಳಲು ನೀನು ಅವಕಾಶವನ್ನೂ ದಯಪಾಲಿಸಿದೆ.

ಆದರೆ ಬಾಳಿನುದ್ದಕ್ಕೂ ನೀ ನನ್ನ... ನೀನು ಮಾತ್ರವೇ ನನ್ನ
ಪರಮಾಪ್ತ ಪ್ರಾಣ ಆಗಬೇಕೆಂದು ಹಂಬಲಿಸಿದೆ ನಾ.

ಅಲ್ಲಿ ಸ್ವಾರ್ಥ ಇಲ್ಲ ಅಂತ ಖಂಡಿತಾ ಹೇಳಲಾರೆ.
ನನ್ನ ಮನದ ನೋವ ತಣಿಸುವ ತಂಗಾಳಿಯಾಗಬೇಕು ನೀ ಎಂಬೊಂದು ಸ್ವಾರ್ಥವಿತ್ತು.

ನಿನ್ನ ಸುಕೋಮಲ ಕೆನ್ನೆಯಲ್ಲಿ ಇಳಿದು ಹರಿಯುವ ಮುನ್ನವೇ
ಆ ಕಣ್ಣೀರನೊರೆಸುವ ಕರವಸ್ತ್ರ ನಾನಾಗಬೇಕೆಂಬ ತುಡಿತವಿತ್ತು.
ಎಲ್ಲರೂ ಇದ್ದರೂ ಒಂಟಿತನ ಅನುಭವಿಸುತ್ತಿರುವುದನ್ನು ಅರ್ಥೈಸಿಕೊಂಡೆ ನೀನು

ಕನಸಾಗಿ ಬಂದೆ, ನೀರಸ ಬದುಕಿಗೆ ರಸವಾಗಿ ಜತೆಯಲ್ಲೇ ನಿಂದೆ,
ನನ್ನೆಲ್ಲಾ ಕೋಪಾಟೋಪಗಳಿಗೆ ಕಡಿವಾಣ ಹಾಕಿದೆ...

ಓ ನನ್ನ ಜೀವದ ಜೀವವೇ,
ಬಾಳ ಕೊನೆಗೊಮ್ಮೆ ಈ ಬದುಕಿಗೆ ವಿದಾಯ ಹಾಡುವ ಮುನ್ನ
ನಿನ್ನ ಮಡಿಲಲ್ಲಿ ತಲೆಯಿಟ್ಟು ಮತ್ತೊಮ್ಮೆ ನಿನ್ನ ಮಮಕಾರದ
ಸಿಂಚನದಲ್ಲಿ ಒದ್ದೆಯಾಗುವಾಸೆ, ಅದನ್ನು ಈಡೇರಿಸೆಯಾ???